Gender equality: ಕೆಲಸದ ಸ್ಥಳದಲ್ಲಿ ಲಿಂಗಭೇದ ಮಾಡ್ತಾರಾ? ಸಮಾನತೆಗಾಗಿ ನೀವೂ ಹೋರಾಡಿ
ಭಾರತದ ಮಹಿಳೆಯು ಪುರುಷರಷ್ಟೇ ಶೈಕ್ಷಣಿಕ ಅರ್ಹತೆ ಮತ್ತು ಕೆಲಸದ ಅನುಭವದ ಹೊಂದಿದ್ದರೂ, ಸಾಮಾಜಿಕ ಮತ್ತು ಉದ್ಯೋಗದಾತರ ಪೂರ್ವಾಗ್ರಹಗಳಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ತಾರತಮ್ಯಕ್ಕೆ ಒಳಗಾಗುತ್ತಾರೆ..
ಜಗತ್ತು ತುಂಬಾ ಮುಂದುವರಿದಿದೆ. ಪುರುಷ ಸಮಾನಳಾಗಿ ಹೆಣ್ಣು ಕೂಡಾ ಬದುಕುತ್ತಿದ್ದಾಳೆ ಎಂಬ ಮಾತು ಹಲವು ಬಾರಿ ಸುಳ್ಳಾಗುತ್ತದೆ. ಎಲ್ಲಾ ಮಜಲುಗಳಲ್ಲೂ ಹೆಣ್ಣುಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಒಂದೇ ಸಮನಾದ ಪ್ರತಿಭೆ ಅವರಲ್ಲೂ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಅನೇಕ ಉದ್ಯಮಗಳು ಕೂಡಾ ಲಿಂಗ ಸಮಾನತೆಯ ಕಡೆಗೆ ಹೆಚ್ಚಿನ ಗಮನ ಹರಿಸಿ, ಅದರಲ್ಲಿ ಪ್ರಗತಿ ಸಾಧಿಸಿದ್ದರೂ ಸಹ, ನಾಯಕತ್ವದ ವಿಚಾರ ಬಂದಾಗ ಮಹಿಳೆಯರು ಇನ್ನೂ ಕಡಿಮೆ ಕ್ಷೇತ್ರಗಳಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಮಹಿಳಾ ನಾಯಕರ ಬಗ್ಗೆ ಹಾಗೂ ನಾಯಕತ್ವದ ಬಗ್ಗೆ ತಪ್ಪು ಕಲ್ಪನೆಗಳು ಇನ್ನೂ ಮುಂದುವರಿದಿವೆ. ಹಲವು ಕ್ಷೇತ್ರಗಳಲ್ಲಿ ಅವರು ಅಡೆತಡೆಗಳನ್ನು ಎದುರಿಸುತ್ತಾರೆ.
ಆಕ್ಸ್‌ಫ್ಯಾಮ್ ಇಂಡಿಯಾದ ಹೊಸ ವರದಿಯ ಪ್ರಕಾರ, ಭಾರತದಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ಉದ್ಯೋಗದ ಅಂತರವೇ ಶೇಕಡಾ 98ರಷ್ಟು ಲಿಂಗ ತಾರತಮ್ಯಕ್ಕೆ ಕಾರಣವಾಗಿದೆ. ಆಕ್ಸ್‌ಫ್ಯಾಮ್ ಇಂಡಿಯಾದ 'ಭಾರತೀಯ ತಾರತಮ್ಯ ವರದಿ 2022'ರ ಪ್ರಕಾರ, ಗ್ರಾಮೀಣ ಪ್ರದೇಶದ ಮಹಿಳೆಯರು 100 ಪ್ರತಿಶತದಷ್ಟು ಉದ್ಯೋಗ ಅಸಮಾನತೆಗೆ ಒಳಗಾಗಿದ್ದರೆ, ನಗರ ಪ್ರದೇಶಗಳಲ್ಲಿ 98 ಪ್ರತಿಶತದಷ್ಟು ಅಸಮಾನತೆಗೆ ಕಾರಣವಾಗುತ್ತದೆ ಎಂದು ಹೇಳಿದೆ. ಅಂದರೆ, ಈ ವರದಿಯ ಪ್ರಕಾರ, ಲಿಂಗ ತಾರತಮ್ಯಕ್ಕೆ ಪುರುಷರು ಮತ್ತು ಮಹಿಳೆಯರ ನಡುವಿನ ಉದ್ಯೋಗದ ಅಂತರವೇ ಮುಖ್ಯ ಕಾರಣ.
ಭಾರತದ ಮಹಿಳೆಯು ಪುರುಷರಷ್ಟೇ ಶೈಕ್ಷಣಿಕ ಅರ್ಹತೆ ಮತ್ತು ಕೆಲಸದ ಅನುಭವದ ಹೊಂದಿದ್ದರೂ, ಸಾಮಾಜಿಕ ಮತ್ತು ಉದ್ಯೋಗದಾತರ ಪೂರ್ವಾಗ್ರಹಗಳಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ತಾರತಮ್ಯಕ್ಕೆ ಒಳಗಾಗುತ್ತಾರೆ ಎಂದು ಅದು ಹೇಳಿದೆ.
ಮಹಿಳೆಯರು ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯವನ್ನು ವಿವಿಧ ರೀತಿಯಲ್ಲಿ ಅನುಭವಿಸಬಹುದು. ಎಲ್ಲರಿಗೂ ಸಮಾನ ಹಕ್ಕುಗಳಿದ್ದರೂ, ದೇಶ ಅಭಿವೃದ್ಧಿ ಸಾಧಿಸಿದರೂ, ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯವು ಗಂಭೀರ ಸಮಸ್ಯೆಯಾಗಿ ಮುಂದುವರೆದಿದೆ. ಲಿಂಗ ತಾರತಮ್ಯದ ವಿರುದ್ಧ ಕಾನೂನುಗಳಿವೆ ಎಂದು ಎಲ್ಲರಿಗೂ ತಿಳಿದಿದ್ದರೂ, ಇನ್ನೂ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಗಿದ್ದರೆ, ಲಿಂಗ ತಾರತಮ್ಯವನ್ನು ನಿವಾರಿಸುವುದು ಹೇಗೆ?
ಎಲ್ಲದಕ್ಕೂ ಮೊದಲ ಹೆಜ್ಜೆ ಶಿಕ್ಷಣ. ಒಂದು ವಿಷಯದ ಬಗ್ಗೆ ಸರಿಯಾದ ಅರಿವು ಇಲ್ಲದಿದ್ದರೆ, ಅದರ ಬಗ್ಗೆ ಮುಂದುವರಿಯಲು ಸಾಧ್ಯವಿಲ್ಲ. ಸಮಸ್ಯೆ ಇದೆ ಎಂದು ನಿಮ್ಮ ಸಹೋದ್ಯೋಗಿಗಳಿಗೆ ತಿಳಿದಿಲ್ಲದಿದ್ದರೆ, ಅವರು ಅಲ್ಲಿ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ. ಲಿಂಗಭೇದದ ಬಗ್ಗೆ ನಿಮ್ಮ ಸಂಸ್ಥೆಗೆ ಎಷ್ಟು ತಿಳಿದಿದೆ ಮತ್ತು ಅದನ್ನು ತಡೆಯುವುದು ಹೇಗೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಬಗ್ಗೆ ಸ್ಪಷ್ಟ ಶಿಕ್ಷಣ ಮತ್ತು ಅರಿವಿದ್ದಾಗ ಕೆಲಸದ ಸ್ಥಳದಲ್ಲಿ ಪಕ್ಷಪಾತವಾಗುತ್ತಿರುವ ಮಾಹಿತಿ ಸಿಕ್ಕಾಗ ಅದನ್ನು ಗುರುತಿಸಲು ಸಿದ್ಧರಾಗಬಹುದು.
ಪೇರಂಟಲ್ ಲೀವ್
ಕಂಪನಿಗಳು ಅಥವಾ ಉದ್ಯೋಗದಾತರು ಕನಿಷ್ಠ ಪಕ್ಷ ಕೆಲವು ತಿಂಗಳ ಪೇರೆಂಟಲ್ ಲೀವ್ ನೀಡಬೇಕು. ಮಗುವನ್ನು ಪೋಷಿಸಲು ಬೇಕಾದ ಸಮಯ ಮಹಿಳೆಯರಿಗೆ ಸಿಕ್ಕರೆ, ಅನೇಕ ಆರೋಗ್ಯ ಮತ್ತು ವೃತ್ತಿ ಪ್ರಯೋಜನಗಳಿವೆ. ಹೀಗಾಗಿ ನಿಮಗೆ ಬೇಕಾದ ರಜೆಯನ್ನು ನೀವು ಕೇಳಿ ಪಡೆಯಿರಿ.
ಮಾನಸಿಕ ಆರೋಗ್ಯ
ಉದ್ಯೋಗಿ ಯೋಗಕ್ಷೇಮ ಮತ್ತು ಮಾನಸಿಕ ಆರೋಗ್ಯ ತುಂಬಾ ಮುಖ್ಯ. ಕೆಲವೊಮ್ಮೆ ಕೆಲಸದ ಒತ್ತಡ ಅಥವಾ ತಾರತಮ್ಯದಿಂದಾಗಿ ಅನೇಕ ಉದ್ಯೋಗಿಗಳು ಒತ್ತಡ, ಆತಂಕ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಇದು ಸರಿಯಲ್ಲ. ಇಂತಹ ಒತ್ತಡ ನಿಮಗೆ ನಿಮ್ಮ ಕಂಪನಿ ನೀಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ವೇತನ ಪರಿಷ್ಕರಣೆ
ಲಿಂಗದ ಆಧಾರದ ಮೇಲೆ ವೇತನ ನೀಡುವಾಗ ಅಂತರ ಕಾಯ್ದುಕೊಳ್ಳುವ ಬಗ್ಗೆ ಕೇಳಿದ್ದೇವೆ. ನೀವು ಕೂಡಾ ನಿಮ್ಮ ಕಂಪನಿಯು ಸಮಾನ ವೇತನದ ನಿಯಮ ಅನುಸರಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮಹಿಳೆ ಎಂಬ ಕಾರಣಕ್ಕೆ ಯಾರೂ ಕಡಿಮೆ ವೇತನವನ್ನು ಪಡೆಯುತ್ತಿಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
IMAGES
VIDEO